ತುಮಕೂರು
ಇದೀಗ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗೃಹ ಇಲಾಖೆಯು ನಡೆಯುತ್ತಿರುವ ಪ್ರಕರಣಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ಕಠಿಣವಾದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೊಲೆ ಮಾಡಲು ಮುಂದಾಗುವ ಆರೋಪಿಗಳಿಗೆ ಕಾನೂನಿನ ಬಗ್ಗೆ ಭಯ ಮೂಡುವಂತೆ ಮಾಡುತ್ತಿದೆ.ಆದರೆ ಕಾನೂನಿನ ಚೌಕಟ್ಟಿನಲ್ಲಿ ಎಂಥಹದೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದರು ಕೊಲೆ ಪ್ರಕರಣಗಳಿಗೆ ಮುಕ್ತಿ ನೀಡಲು ಸಾಧ್ಯವಾಗದಿರುವುದು ಗೃಹ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ.ಇದೀಗ ಗೃಹ ಸಚಿವರ ತವರಲ್ಲಿಯೇ ಕೊಲೆ ಆರೋಪದ ಇಂತಹದೊಂದು ಪ್ರಕರಣವು ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ತುಮಕೂರು ತಾಲೂಕಿನ ಶ್ರೀ ಆಟವಿ ಸಿದ್ದಲಿಂಗೇಶ್ವರ ಪ್ರೌಡ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೇತನ್ ಕುಮಾರ್ ಎನ್ನುವ ವಿದ್ಯಾರ್ಥಿ ಕೊಲೆಯಾಗಿರುವ ದುರ್ದೈವಿ.ತುಮಕೂರು ತಾಲೂಕಿನ ಕೋರ ಹೋಬಳಿಯ ಕರಿಕೇರಿ ಗ್ರಾಮದ ಚೇತನ್ ಕುಮಾರ್ ಎನ್ನುವ ವಿದ್ಯಾರ್ಥಿಯು ಶ್ರೀ ಆಟವಿ ಸಿದ್ದಲಿಂಗೇಶ್ವರ ಪ್ರೌಡ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು,ಸ್ವಲ್ಪ ದಿನಗಳ ಹಿಂದೆ ಇದೆ ಶಾಲೆಯ ರಿಜ್ವಾನ್ ಎನ್ನುವ ವಿದ್ಯಾರ್ಥಿಯ ಜೊತೆ ಈ ಚೇತನ್ ಕುಮಾರ್ ಗಲಾಟೆ ಮಾಡಿಕೊಂಡಿರುತ್ತಾನೆ.ಗಲಾಟೆಯ ಹಿನ್ನಲೆಯಲ್ಲಿ ರಿಜ್ವಾನ್ ಮತ್ತು ರಿಜ್ವಾನನ ಪಾಲಕರು,ಚೇತನ್ ಕುಮಾರ್ ನ ಕರಿಕೇರೆ ಗ್ರಾಮದ ಮನೆಗೆ ಬಂದು ಗಲಾಟೆ ಮಾಡುವ ಮೂಲಕ ರಂಜಾನ್ ಹಬ್ಬ ಮುಗಿದು,ಪರೀಕ್ಷೆಗಳು ಮುಗಿಯಲಿ ಅವಾಗ ನಿನ್ನನ್ನು ನೋಡಿಕೊಳ್ಳುತ್ತೇವೆ ಎನ್ನುವ ಬೇದರಿಕೆ ಹಾಕಿರುತ್ತಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಮಾತುಗಳಾಗಿವೆ.
ಇನ್ನು,ಚೇತನ್ ಕುಮಾರನ ಜೊತೆ ಗಲಾಟೆ ಮಾಡಿಕೊಂಡಿದ್ದ ರಿಜ್ವಾನ್ ಎನ್ನುವ ವಿದ್ಯಾರ್ಥಿಯು ಕೆಲವು ದಿನಗಳ ಹಿಂದೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಹಂತದ ಕೊನೆಯ ದಿನದಂದು ಸ್ನೇಹಿತರ ಜೊತೆಗೂಡಿ ಶಾಲಾ ಆವರಣದಲ್ಲಿಯೇ ಚೇತನ್ ಕುಮಾರನ ಮೇಲೆ ಮರಣಾಂತಿಕಾ ಹಲ್ಲೆ ಮಾಡಿದ್ದು,ಜಗಳದಿಂದ ಭಯಬಿತನಾದ ಚೇತನ್ ಕುಮಾರ್ ನಡೆದಿರುವ ಘಟನೆಯ ಬಗ್ಗೆ ಯಾವುದೇ ವಿಚಾರವನ್ನು ಮನೆಯವರಿಗೆ ತಿಳಿಸದೇ,ಕ್ರಿಕೇಟ್ ಆಡುವಾಗ ಬಿದ್ದು ಕಾಲಿಗೆ ಏಟಾಗಿದೆ ಎನ್ನುವ ಸುಳ್ಳು ಮಾಹಿತಿ ಮೇರೆಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿರುತ್ತಾನೆ.ಆದರೆ ಕಾಲ ಕ್ರಮೇಣ ಕಾಣಿಸಿಕೊಂಡ ಎದೆನೋವಿನ ತೊಂದರೆಯಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾದಾಗ,ವೈದ್ಯರು ನೀಡಿದ ಪರೀಕ್ಷೆಯ ಮೇರೆಗೆ ಶಾಲಾ ಆವರಣದಲ್ಲಿ ನಡೆದಿರುವ ಜಗಳದ ಬಗ್ಗೆ ತಾಯಿಗೆ ತಿಳಿಸಿ ಕೆಲವು ದಿನಗಳ ನಂತರದಲ್ಲಿ ಪ್ರಾಣವನ್ನು ಬಿಟ್ಟಿರುತ್ತಾನೆ ಎನ್ನುವ ಮಾಹಿತಿಯು ಸಂಬಂಧಿಕರಿಂದ ತಿಳಿದುಬಂದಿರುತ್ತದೆ.ಆದರೆ ಶಾಲೆಯ ಆವರಣದಲ್ಲಿ ನಡೆದ ಸಣ್ಣ ಪುಟ್ಟ ಜಗಳದ ಘಟನೆಯು ಸಾವಿನ ಹಂತ ತಲುಪಿರುವುದು ಮನುಕುಲವೇ ತಲೆ ತಗ್ಗಿಸುವ ಘಟನೆಯಾಗಿದೆ.ಇನ್ನೂ ಸಾವಿಗಿಡಾದ ಚೇತನ್ ಕುಮಾರನ ಪಾಲಕರು ಮೊದಲೇ ಬಡ ಮತ್ತು ಹಿಂದುಳಿದ ಕುಟುಂಬದವರಾಗಿರುವುದರಿಂದ ನಡೆದಿರುವ ಜಗಳದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸದೆ ಅಂತ್ಯಕ್ರಿಯೆಯ ಕಾರ್ಯವನ್ನು ಮುಗಿಸಿರುತ್ತಾರೆ.ಆದರೆ ಜಿಲ್ಲೆಯ ಕೆಲವು ಹಿಂದುಳಿದ ಸಂಘಟನೆಕಾರರ ಒತ್ತಾಯದ ಮೇರೆಗೆ ಉಪ ವಿಭಾಗಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಿದ ದೇಹವನ್ನು ಮಣ್ಣಿಂದ ಹೊರಗೆ ತಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುತ್ತಾರೆ.
ಈಗಾಗಲೇ ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ರಿಜ್ವಾನ್ ಮತ್ತು ಸಹಚರರ ಮೇಲೆ ಪ್ರಕರಣ ದಾಖಲಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಆರೋಪಿಗಳು ತಲೆ ಮರೆಸಿಕೊಂಡಿರುವುದಾಗಿ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.ಆದರೆ ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳ ಆವರಣದಲ್ಲಿಯೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುವುದು ಅಲ್ಲಿನ ಆಡಳಿತದ ವ್ಯವಸ್ಥೆಯ ದೌರ್ಬಲ್ಯಕ್ಕೆ ಸಾಕ್ಷಿಯಾಗಿವೆ.ರಾಜ್ಯದ ಶಿಕ್ಷಣ ಇಲಾಖೆಯ ಕಾಯ್ದೆಯ ಪ್ರಕಾರ ಶಿಕ್ಷಣ ನೀಡಲು ಮುಂದಾಗುವ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು,ತಮ್ಮ ಶಾಲೆಗಳ ಆವರಣದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ,ಮಕ್ಕಳಲ್ಲಿ ಮೂಡಿರುವ ಬಿನ್ನಾಭಿಪ್ರಾಯಗಳನ್ನು ಸರಿ ಪಡಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ.ಆದರೆ ಶ್ರೀ ಆಟವಿ ಸಿದ್ದಲಿಂಗೇಶ್ವರ ಪ್ರೌಡ ಶಾಲೆಯ ಆವರಣದಲ್ಲಿ ನಡೆದಿರುವ ಘಟನೆಯನ್ನು ಗಮನಿಸಿದರೆ ಮಕ್ಕಳಲ್ಲಿ ಉಂಟಾಗಿರುವ ಬಿನ್ನಭಿಪ್ರಾಯಗಳನ್ನು ಸರಿ ಪಡಿಸಲು ಮುಂದಾಗದೆ,ಕೊಲೆ ಮಾಡುವ ಮಟ್ಟಕ್ಕೆ ವಿದ್ಯಾರ್ಥಿಗಳು ಬಂದೊದಗಿದ್ದಾರೆ ಅಂದರೆ?ಮಕ್ಕಳಿಗೆ ಶಾಲೆಯಲ್ಲಿ ಅದೆಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿದ್ದಾರೆ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.ಕೂಡಲೇ ಸಚಿವರು ಅನ್ಯಾಯಕ್ಕೆ ಒಳಗಾಗಿರುವ ಕುಟುಂಬದ ಪರಿಸ್ಥಿಯನ್ನು ಅರಿತು ಈಗಾಗಲೇ ಸಾವಿಗಿಡಾದ ಚೇತನ್ ಕುಮಾರನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೋರಕಿಸಿ ಕೊಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಕಾಪಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಬೇಕೆನ್ನುವುದು ಜಿಲ್ಲೆಯ ಜನರ ಆಶಯವಾಗಿದೆ.
ವರದಿ:ನಟರಾಜ್ ತುಮಕೂರು