ವಿಜಯನಗರ
ಅದ್ಯಾಕೋ ಈಗಿನ ಗೃಹ ಸಚಿವರ ವೈಪಲ್ಯತೆಯಿಂದ ಪೊಲೀಸ್ ಇಲಾಖೆಯ ಬಹುತೇಕ ಅಧಿಕಾರಿಗಳು ಅಕ್ರಮ ದಂಧೆಕೋರರ ಸಹವರ್ತಿಗಳಂತೆ ಬಿಂಬಿಸಿಕೊಳ್ಳುತ್ತಾ ಅಕ್ರಮ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲು ಮುಂದಾಗುತ್ತಿರುವುದು ರಾಜ್ಯದಲ್ಲೆಡೆ ಕೇಳಿ ಬಂದಿರುವ ವಿಷಯಗಳಾಗಿವೆ.ಇದೀಗ ಅಧಿಕಾರಿಗಳ ನಿರ್ಲಕ್ಷತೆಯಿಂದ ಇಂತಹ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬಂದಿರುವುದು ವಿಜಯನಗರ ಜಿಲ್ಲೆಯಲ್ಲಿ.ಇಲ್ಲಿರುವ ಜಿಲ್ಲಾಡಳಿತದ ವೈಪಲ್ಯನೋ!ದುರಾಡಳಿತವೋ!ಗೊತ್ತಿಲ್ಲ.ಒಟ್ಟಾರೆ ಜಿಲ್ಲೆಯಾದ್ಯಂತ ಜನಸಾಮಾನ್ಯರ ಜೀವನಕ್ಕೆ ಮಾರಕವಾಗಿರುವ ಮಟ್ಕಾ,ಇಸ್ಪಿಟ್ ಎಂಬ ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಮಾತ್ರ ತಪ್ಪುತ್ತಿಲ್ಲ.ಈ ಹಿಂದೆ ಹರಪನಹಳ್ಳಿ ತಾಲೂಕಿನ ನಗರ ಪ್ರದೇಶ ಮತ್ತು ಕೆಲವು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೊಬೈಲ್ ಮೂಲಕ ಹೈಟೆಕ್ ಮಾದರಿಯಲ್ಲಿ ನಡೆಯುತ್ತಿರುವ ಮಟ್ಕಾ ದಂಧೆಯ ಕುರಿತು ನಾಯಕನ ನಡುಗೆ ಪತ್ರಿಕೆಯು ಸುದ್ದಿಯನ್ನು ಬಿತ್ತರಿಸಿತ್ತು.ಪ್ರಕಟಗೊಂಡ ಸುದ್ದಿಯ ಬೆನ್ನಲ್ಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ನಡೆಯುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವುದರ ಜೊತೆಗೆ ತಾಲೂಕಿನ ಜನರ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಟ್ಟಿದ್ದು ಅಧಿಕಾರಿಗಳ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ.ಅಂದು ಹರಪನಹಳ್ಳಿ ತಾಲೂಕಿನ ಕೂಲಿ ಶ್ರಮೀಕರನ್ನು ಟಾರ್ಗೆಟ್ ಮಾಡಿದ ಹೈಟೆಕ್ ಮಟ್ಕಾ ದಂಧೆಯು ಇದೀಗ ಹೂವಿನಹಡಗಲಿ,ಕೊಟ್ಟೂರು,ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ ತಾಲೂಕುಗಳಲ್ಲಿ ವ್ಯಾಪಿಸಿರುವುದು ಜಿಲ್ಲಾಡಳಿತದ ವೈಪಲ್ಯಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಈ ಜಿಲ್ಲೆಯು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿರುವ ಜಿಲ್ಲೆಯಾಗಿರುವುದರಿಂದ ಈ ಭಾಗದ ಪ್ರದೇಶಗಳು ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ,ಅಭಿವೃದ್ದಿ ಕಾರ್ಯದಲ್ಲಿ ಕುಂಟಿತವಾಗಿರುವುದು ರಾಜ್ಯಕ್ಕೆ ಗೋತ್ತಿರುವ ವಿಷಯ.ಆಗಿನಿಂದನೂ ಈ ಸರ್ಕಾರಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಅನುದಾನಗಳನ್ನು ನೀಡುತ್ತಾ ಬರುತ್ತಿದೆ ಎನ್ನುವುದನ್ನ ಹೇಳಬೇಕಾಗಿಲ್ಲ,ರಾಜ್ಯದ ಜನತೆಗೆ ಅರ್ಥವಾಗಿರುವ ವಿಷಯವೇ ಬಿಡಿ.ಇನ್ನು,ಕಳೆದ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆಗಿರುವ ಅನ್ಯಾಯದ ಹಿನ್ನಲೆಯಲ್ಲಿ ಈ ಭಾಗದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಸಾಮೂಹಿಕ ಸಮಾರಂಭವೊಂದರಲ್ಲಿ “ನೀವು ನೀಡುತ್ತಿರುವ ಅನುದಾನವು ದಕ್ಷಿಣ ಕರ್ನಾಟಕದಿಂದ ಪ್ರಾರಂಭಗೊಂಡು ದಾವಣಗೆರೆ ಜಿಲ್ಲೆಗೆ ಬರುವ ಹೊತ್ತಿಗೆ ಮುಗಿದುಹೋಗುತ್ತದೆ.ಆದುದರಿಂದ ಕಲ್ಯಾಣ ಕರ್ನಾಟಕ ಭಾಗದಿಂದ ಪ್ರಾರಂಭಿಸಿದರೆ ಕಲ್ಯಾಣ ಕರ್ನಾಟಕ್ಕೆ ಕಲ್ಯಾಣವಾಗುತ್ತದೆ” ಎನ್ನುವ ಮಾತುಗಳಿಂದ ಉಪ ಮುಖ್ಯಮಂತ್ರಿ ಡಿಕೆಶಿಗೆ ಚಾಟಿ ಬಿಸಿರುವುದು ಒಂದು ಭಾಗವಾದರೆ,ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಜಿಲ್ಲೆಯ ಜನರಿಗೆ ಜಿಲ್ಲಾಡಳಿತ ಕೇಂದ್ರಕ್ಕೆ ತಲುಪಲು ಸಹಾಯಕವಾಗುವುದರ ಜೊತೆಗೆ ಜಿಲ್ಲೆಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರಬಹುದು ಎನ್ನುವ ಮುಂದಾಲೋಚನೆಯಿಂದ ಆಗಿನ ಶಾಸಕ ಆನಂದಸಿಂಗ್ ಹಲವು ವರ್ಷಗಳ ಹೋರಾಟದ ಮುಖಾಂತರ ತಾಲೂಕು ಕೇಂದ್ರವಾಗಿದ್ದ ವಿಜಯನಗರವನ್ನು,ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.ಜಿಲ್ಲೆಯ ಜನರಿಗೆ ಅನುಕೂಲವಾಗಲೆಂದು ರಾಜಕೀಯದ ಅನೇಕ ದುರಿಣರು ಹೋರಾಟದ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮೀಸಲು ಮುಂದಾಗುತಿದ್ದರೆ,ಇಲ್ಲಿನ ಆಡಳಿತದ ಸುವ್ಯಸ್ಥೆಯಿಂದ ಜನರ ಜೀವನಕ್ಕೆ ಮಾರಕವಾಗಿರುವ ಮಟ್ಕಾ,ಇಸ್ಪಿಟ್ ದಂಧೆಗಳು ಜಿಲ್ಲೆಯ ಜನರ ಜೀವನಕ್ಕೆ ಕಂಟಕವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇನ್ನು,ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಭೂಮಿಯ ಆಳದಲ್ಲಿ ಕಲ್ಲಿನ ಪ್ರಮಾಣವು ಅಧಿಕವಾಗಿರುವ ಹಿನ್ನಲೆಯಿಂದ ಜಮೀನುಗಳಲ್ಲಿ ಸಮರ್ಪಕ ಬೆಳೆಗಳನ್ನು ಬೆಳೆಯಲು ರೈತರು ಪರದಾಡುವಂತ ಪರಿಸ್ಥಿತಿ ಒಂದಡೆಯಾದರೆ,ಅಂತರ್ಜಲದ ಅಭಾವದಿಂದ ತಮ್ಮ ಜಮೀನುಗಳನ್ನು ಹಾಳುಗೆಡವಿ ಮತ್ತೊಬ್ಬರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಂದ ಅಲ್ಪ ಸ್ವಲ್ಪ ಕೂಲಿ ಹಣದಲ್ಲಿ ಜೀವನ ಸಾಗಿಸುವುದು ಇನ್ನೊಂದು ಭಾಗದ ಜನರ ಕಾಯಕವಾಗಿದೆ.ಈಗಾಗಲೇ ಕೆಲಸವಿಲ್ಲದೆ ಜಿಲ್ಲೆಯ ಜನರು ಜೀವನ ಸಾಗಿಸಲು ಪರಿದಾಡುತ್ತಿರುವ ಸಂದರ್ಭದಲ್ಲಿ,ಕೊಟ್ಟೂರು ಮತ್ತು ಹೂವಿನಹಡಗಲಿ ಪಟ್ಟಣದ ಮಟ್ಕಾ ದಂಧೆಕೊರರು ಜನರಿಗೆ ಹಣದ ಆಮೇಷವನ್ನು ತೋರಿಸಿ ಮಟ್ಕಾ ಜೂಜಾಟದ ಅಂಕಿಗೆ ಹಾಕಿದ ಅಂಕಿ ಬಿದ್ದರೆ ಒಂದಕ್ಕೆ ಹತ್ತರಷ್ಟು ನೀವು ಕಟ್ಟಿದ ಹಣ ವಾಪಸ್ ಬರುತ್ತೆ ಎಂದು ಪ್ರಚೋದನೆ ನೀಡುತ್ತಾ ಜನರು ಕೂಲಿ ಮಾಡಿದ ಹಣವನ್ನೆಲ್ಲಾ ಮಟ್ಕಾ ಎಂಬ ಜೂಜಾಟಕ್ಕೆ ಹಾಕುವಂತೆ ಮಾಡುತ್ತಿರುವುದು ಒಂದು ಭಾಗವಾದರೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಸತ್ತೂರು ಗ್ರಾಮದ ಅರಣ್ಯ ಪ್ರದೇಶದ ಅಕ್ಕಪಕ್ಕದ ಪ್ರದೇಶಗಳಲ್ಲಿ ರಾಜಾರೋಷವಾಗಿ ಇಸ್ಪಿಟ್ ಆಟಗಳನ್ನು ಆಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳಾಗಿವೆ.ಅದು ಏನೇ ಇರಲಿ ನಡೆಯುತ್ತಿರುವ ಅಕ್ರಮಗಳು ಸಂಬಂಧಪಟ್ಟ ಠಾಣೆಯ ಅಧಿಕಾರಿಗಳ ಗಮನಕ್ಕೆ ಬಂದಿದೆಯ ಅಥವಾ ಇಲ್ಲವಾ ಗೊತ್ತಿಲ್ಲ.ಒಟ್ಟಾರೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಪೊಲೀಸ್ ಇಲಾಖೆಯ ಕರ್ತವ್ಯ.
ಈ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಕೊಟ್ಟೂರು,ಹೂವಿನಹಡಗಲಿ,ಹಗರಿಬೊಮ್ಮನಹಳ್ಳಿ ತಾಲೂಕಿನ ಬೀಡಾ ಪೆಟ್ಟಿ ಅಂಗಡಿಗಳಲ್ಲಿ ಮತ್ತು ದಂಧೆಕೋರರ ಇನ್ನಿತರೇ ಗುಪ್ತ ಸ್ಥಳಗಳಲ್ಲಿ ಯಾರಿಗೂ ಗೋತ್ತಾಗದ ರೀತಿಯಲ್ಲಿ ಮೊಬೈಲ್ ಗಳ ಮೂಲಕ ಹೈಟೆಕ್ ಮಾದರಿಯಲ್ಲಿ ನಡೆಸುತ್ತಿರುವ ಮಟ್ಕಾ ದಂಧೆಕೋರರ ಮೇಲೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸುವುದರ ಜೊತೆಗೆ ಈಗಾಗಲೇ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ಮಟ್ಕಾ ಮತ್ತು ಇಸ್ಪಿಟ್ ಜೂಜಾಟಗಳಿಗೆ ಕಡಿವಾಣ ಹಾಕುವುದರ ಮೂಲಕ ಜಿಲ್ಲೆಯ ಜನರಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಡುವುದು ತಮ್ಮ ಜವಾಬ್ದಾರಿಯಾಗಿದೆ.