ಹರಿಹರ
ರಾಜ್ಯ ಸರ್ಕಾರದ ಖಜಾನೆಯ ಬೊಕ್ಕಸಕ್ಕೆ ಹೆಚ್ಚಿನ ತೇರಿಗೆ ಸಂಗ್ರಹಿಸುವಲ್ಲಿ ಅಬಕಾರಿ ಇಲಾಖೆಯ ಪಾತ್ರ ಅತ್ಯಮೂಲ್ಯ.ಇದೆ ನಿಟ್ಟಿನಲ್ಲಿ ಸರ್ಕಾರವು ಮದ್ಯಪಾನ ಮಾರಾಟ ಮಾಡಲು ಮುಂದಾಗುವ ವ್ಯಕ್ತಿಗಳಿಗೆ ಪರವಾನಿಗೆ ನೀಡುವುದರ ಮೂಲಕ ನೀಡಿರುವ ಷರತ್ತುಗಳನ್ವಯ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವಂತೆ ಸೂಚಿಸಿರುತ್ತದೆ.ಆದರೆ ಅಬಕಾರಿ ಅಧಿಕಾರಿಗಳ ದುರಾಡಳಿತದಿಂದ ಸರ್ಕಾರ ಸೂಚಿಸಿರುವ ಷರತ್ತುಗಳಿಗೆ ಕಿಂಚಿತ್ತು ಬೆಲೆ ನೀಡದೆ,ಪರವಾನಿಗೆ ಪಡೆದಿರುವ ಅದೆಷ್ಟೋ ಮದ್ಯಪಾನ ಅಂಗಡಿಯ ಮಾಲೀಕರು ಬಹು ಬೇಗನೆ ಶ್ರೀಮಂತರಾಗಬೇಕು ಎನ್ನುವ ದುರುದ್ದೇಶದಿಂದ ಸರ್ಕಾರವು ನೀಡಿರುವ ಷರತ್ತುಗಳನ್ನು ಗಾಳಿಗೆ ತೂರಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಲು ಕುಮ್ಮಕ್ಕು ನೀಡುತ್ತಿರುವುದು ರಾಜ್ಯದಲ್ಲೆಡೆ ಕಂಡುಕೊಂಡಿರುವ ದೃಶ್ಯಗಳಾಗಿವೆ.ಇದೀಗ ಇಂತಹದೊಂದು ಲಾಭ ಗಳಿಸುವ ದುರುದ್ದೇಶದಿಂದ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಲು ಕುಮ್ಮಕ್ಕು ನೀಡುತ್ತಿರುವುದರ ಮೂಲಕ ಹಳ್ಳಿಗಳ ಜನಸಾಮಾನ್ಯರ ಜೀವನಕ್ಕೆ ಕಂಟಕವಾಗಿರುವ ಮದ್ಯಪಾನದ ಅಂಗಡಿಗಳು ಕಂಡುಬಂದಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ.
ಈಗಾಗಲೇ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ದೃಶ್ಯಗಳು ಕಣ್ಣಿಂಚನಲ್ಲಿ ಸವಿಯುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ಇಲ್ಲಿನ ಜಿಲ್ಲಾಡಳಿತದ ವೈಪಲ್ಯಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.ಇನ್ನೂ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿರುವ ವ್ಯಕ್ತಿಗಳು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಮದ್ಯ ಮಾರಾಟವನ್ನೇ ತಮ್ಮ ಜೀವನದ ಕಸುಬನ್ನಾಗಿ ಮಾಡಿಕೊಂಡು,ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಜೀವನಕ್ಕೆ ಮುಂದಾಗಿರುವ ಹಳ್ಳಿಗಳ ಜನಸಾಮನ್ಯರ ಜೀವನಕ್ಕೆ ಕಂಟಕವಾಗಿರುವುದು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಾ ಸೇವೆಯಲ್ಲಿ ಭ್ರಷ್ಟತೆ ತೋರುತ್ತಿರುವ ಅಬಕಾರಿ ನಿರೀಕ್ಷಕ ಶಿವರಾಜನ ನಡೆಯಾದರೂ ಏನು? ಈಗಾಗಲೇ ಹರಿಹರ ತಾಲೂಕಿನ ಬಹುತೇಕ ಅಂದರೆ ಪತ್ರಿಕೆಯಲ್ಲಿ ಪ್ರಕಟಿಸಲು ಜಾಗವಿಲ್ಲದಷ್ಟು ಗ್ರಾಮಗಳಲ್ಲಿರುವ ಮನೆ ಮತ್ತು ಬೀಡಾ ಪೆಟ್ಟಿ ಅಂಗಡಿ ಇನ್ನಿತರೆ ಭಾಗಗಳಲ್ಲಿ ಯಾವೊಬ್ಬ ಅಧಿಕಾರಿಗೂ ಭಯ ಪಡದೇ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಒಂದಡೆ ಅಕ್ರಮ ಕಂಡುಬಂದರೆ,ನಗರದ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲವು ಹೊಟೇಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ಮತ್ತೊಂದಡೆಯಲ್ಲಿ ಕೇಳಿ ಬಂದಿರುವ ಅಕ್ರಮವಾಗಿದೆ.
ಇನ್ನು,ಸರ್ಕಾರದ ಅಬಕಾರಿ ನಿಯಮಾವಳಿ ಪ್ರಕಾರ ಮದ್ಯ ಮಾರಾಟ ಮಾಡಲು ಪರವಾನಿಗೆ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು,ಪಡೆದಿರುವ ಪರವಾನಿಗೆ ಅನುಗೂಣವಾಗಿ ತೇರಿಗೆಯನ್ನು ಭರ್ತಿ ಮಾಡಿ ಸರ್ಕಾರ ವಿಧಿಸಿರುವ ಷರತ್ತುಗಳನ್ವಯ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು ಎನ್ನುವ ಸಾಲುಗಳು ಅಬಕಾರಿ ನಿಯಮದಲ್ಲಿ ಉಲ್ಲೇಖವಾಗಿರುತ್ತದೆ.ಆದರೆ ತಾಲೂಕಿನಲ್ಲೆಡೆ ಮದ್ಯಪಾನ ಮಾರಾಟಕ್ಕೆ ಪರವಾನಿಗೆ ಪಡೆದಿರುವ ಅದೆಷ್ಟೋ ಅಂಗಡಿಯ ಮಾಲೀಕರು ಸರ್ಕಾರ ಸೂಚಿಸಿರುವ ಷರತ್ತುಗಳನ್ನು ಪಾಲಿಸದೆ ಮನಬಂದಂತೆ ವ್ಯಾಪಾರಕ್ಕೆ ಮುಂದಾಗಿರುವುದು ಕಂಡುಬಂದಿದ್ದರು,ಅಬಕಾರಿ ಉಲ್ಲಂಘನೆ ಮಾಡಿರುವ ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಅಬಕಾರಿ ಇಲಾಖೆಯ ನಡೆಯಾದರೂ ಏನು?ಈಗಾಗಲೇ ಸರ್ಕಾರದ ಪರವಾನಿಗೆ ಮೇರೆಗೆ ತಾಲೂಕಿನಲ್ಲಿ ಮೂವತ್ತೆಂಟು ಅಂಗಡಿಯ ಮಾಲೀಕರು ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ.ಸಿಎಲ್.2 ಅಡಿಯಲ್ಲಿ ಹೈದಿನಾರು ಜನ ಪರವಾನಿಗೆ ಪಡೆದರೆ,ಸಿಎಲ್.7 ಅಡಿಯಲ್ಲಿ ಮೂವರು ಮತ್ತು ಸಿಎಲ್.9 ಅಡಿಯಲ್ಲಿ ಹದಿಮೂರು ವ್ಯಕ್ತಿಗಳು ಹಾಗೂ ಸಿಎಲ್.11 ಅಡಿಯಲ್ಲಿ ಆರು ಜನ,ಸಿಎಲ್.4 ಅಡಿಯಲ್ಲಿ ಯಾವುದೇ ವ್ಯಕ್ತಿಗಳು ಪರವಾನಿಗೆ ಪಡಿದಿರುವುದಿಲ್ಲ ಎನ್ನುವ ಮಾಹಿತಿ ತಾಲೂಕಿನ ಅಬಕಾರಿ ಕಾರ್ಯಾಲಯದಿಂದ ಪೂರೈಕೆಯಾಗಿರುತ್ತದೆ.ಅಬಕಾರಿ ನಿಯಮದ ಪ್ರಕಾರ ಸಿಎಲ್.2 ಪರವಾನಿಗೆ ಪಡೆದಿರುವ ವ್ಯಕ್ತಿಯು ಅಂಗಡಿಗೆ ಬರುವ ಮದ್ಯಪ್ರೀಯರಿಗೆ ಅಂಗಡಿಯ ಆವರಣದಲ್ಲಿ ಕುಳಿತುಕೊಂಡು ಮದ್ಯ ಸೇವಿಸಲು ಯಾವುದೇ ಟೇಬಲ್ ಗಳ ವ್ಯವಸ್ಥೆ ಕಲ್ಪಿಸಿಕೊಡದೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಮದ್ಯವನ್ನು ಪಾರ್ಸಲ್ ನೀಡಬೇಕು ಎನ್ನುವುದು ಸರ್ಕಾರ ನೀಡಿರುವ ಷರತ್ತುಗಳಲ್ಲಿ ಒಂದಾಗಿರುತ್ತದೆ.ಆದರೆ ಹರಿಹರ ನಗರ ಪ್ರದೇಶದ ರಾಜು ವೈನ್ಸ್ ಮದ್ಯಪಾನದ ಅಂಗಡಿಯ ಮಾಲೀಕನು ಅಂಗಡಿಗೆ ಬರುವ ಮದ್ಯಪ್ರೀಯರಿಗೆ ಮದ್ಯ ಸೇವಿಸಲು ಟೇಬಲ್ ಗಳ ವ್ಯವಸ್ಥೆ ಕಲ್ಪಿಸುವುದರ ಮುಖಾಂತರ ಮದ್ಯಪ್ರೀಯರ ನಡುವೆ ಗಲಾಟೆಗಳಾಗುವ ಮಟ್ಟಕ್ಕೆ ಅಂಗಡಿಯನ್ನು ನಿರ್ಮಾಣ ಮಾಡಿದ್ದರೆ,ಮಲೆಬೆನ್ನೂರು ನಗರ ಪ್ರದೇಶದಲ್ಲಿ ಸಿ.ಎಲ್.2 ಪರವಾನಿಗೆ ಪಡೆದಿರುವ ಎಸ್,ಆರ್,ವೈನ್ಸ್ ನ ಮಾಲೀಕನು ಅಂಗಡಿಗೆ ಬರುವ ಗ್ರಾಹಕರಿಗೆ ಎಂ.ಆರ್.ಪಿ.ದರದಲ್ಲಿ ಮದ್ಯವನ್ನು ವಿತರಿಸದೆ ಹೆಚ್ಚಿನ ದರದಲ್ಲಿ ಮದ್ಯವನ್ನು ವಿತರಿಸುತ್ತಿದ್ದಾನೆ ಎನ್ನುವುದು ಮದ್ಯಪ್ರೀಯರ ವಲಯದಲ್ಲಿ ಕೇಳಿ ಬಂದಿರುವ ಮಾತುಗಳಾಗಿವೆ.ಹಾಗಂತ ಈ ಎರಡು ಅಂಗಡಿಯ ಮಾಲೀಕರು ಮಾತ್ರ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎನ್ನುವುದು ಪತ್ರಿಕೆಯ ಅನಿಸಿಕೆ ಅಲ್ಲ!ತಾಲೂಕಿನಲ್ಲಿ ಪರವಾನಿಗೆ ಪಡೆದಿರುವ ಬಹುತೇಕ ಅಂಗಡಿಯ ಮಾಲೀಕರು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮದ್ಯ ಮಾರಾಟಕ್ಕೆ ಮುಂದಾಗಿರುವುದು ಕಾಣುತ್ತಿದ್ದರು ಅದ್ಯಾಕೆ?ಅಬಕಾರಿ ನಿರೀಕ್ಷಕ ಶಿವರಾಜ್,ನಿಯಮ ಉಲ್ಲಂಘನೆ ಮಾಡುತ್ತಿರುವ ಅಂಗಡಿಯ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದೆ ಅಂಗಡಿಯ ಮಾಲೀಕರ ಸಂಬಂಧಿಕರಂತೆ ವರ್ತಿಸುತ್ತಿದ್ದಾರೆ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.
ಇನ್ನೂ ಸರ್ಕಾರವು ಈ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ,ವೃದ್ದರಿಗೆ,ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಹುದು ಎನ್ನುವ ಮುಂದಾಲೋಚನೆಯಿಂದ ಮದ್ಯ ಮಾರಾಟ ಮಾಡುವುದಕ್ಕೆ ಮುಂದಾಗುವ ವ್ಯಕ್ತಿಗಳಿಗೆ ಪರವಾನಿಗೆ ನೀಡುವ ಮುಂಚಿತವಾಗಿ ಇಂತಿಷ್ಟು ದೂರದಲ್ಲಿ ಅಂಗಡಿಯನ್ನು ತೇರೆಯಬೇಕು ಎಂದು ಸೂಚಿಸಿರುತ್ತದೆ.ಆದರೆ ಸರ್ಕಾರವು ಸೂಚಿಸಿರುವ ಯಾವುದೇ ನಿಯಮಗಳನ್ನು ಪಾಲಿಸದೆ ಗ್ರಾಮಗಳ ಎಲ್ಲೆಂದರಲ್ಲಿ ಹೆಚ್ಚಿನ ಮೊತ್ತಕ್ಕೆ ಮದ್ಯ ಮಾರಾಟ ಮಾಡುತ್ತಿರುವುದರ ಜೊತೆಗೆ ಹಳ್ಳಿಗಳ ಜನರ ಜೀವನಕ್ಕೆ ಕಂಟಕವಾಗಿರುವುದು ಇಲ್ಲಿನ ತಾಲೂಕು ಆಡಳಿತದ ವೈಪಲ್ಯಕ್ಕೆ ಸಾಕ್ಷಿ ಎಂಬಂತೆ ತೋರುತ್ತಿದೆ.ಈ ಕೂಡಲೇ ಅಬಕಾರಿ ಸಚಿವರು,ಹರಿಹರ ತಾಲೂಕಿನ ಜನರ ಜೀವನಕ್ಕೆ ಕಂಟಕವಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದರ ಮೂಲಕ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಾ,ಅಕ್ರಮಕೋರರಿಗೆ ಹಿಂಬದಿಯಿಂದ ಸಾಥ್ ನೀಡುತ್ತಿರುವ ಅಬಕಾರಿ ನಿರೀಕ್ಷಕನ ವರ್ಗಾವಣೆಗೆ ಮುಂದಾಗುವುದರ ಜೊತೆಗೆ ಮುಂದಿನ ದಿನಗಳಲ್ಲಾದರೂ ತಾಲೂಕಿನ ಜನರು ಹೆಂಡತಿ ಮಕ್ಕಳ ಜೊತೆ ನೆಮ್ಮದಿಯ ಜೀವನಕ್ಕೆ ಮುಂದಾಗುವಂತೆ ಮಾಡುವುದು ತಮ್ಮ ಕರ್ತವ್ಯವಾಗಿದೆ.